ವಾಗ್ಭೂಷಣ
	ಸಾಹಿತ್ಯಕ್ಕೆ ಸಂಪೂರ್ಣವಾಗಿ ಮೀಸಲಾಗಿದ್ದ ಮಾಸ ಪತ್ರಿಕೆ. ಧಾರವಾಡದಿಂದ 1896ರಲ್ಲಿ ಪ್ರಕಟವಾಗಲಾರಂಭಿಸಿತು. ಗ್ರಂಥಪ್ರಚಾರದ ಸಾಧನವಾಗಿ ಹಾಗೂ ಭಾಷಾಭಿವೃದ್ಧಿಗಾಗಿ ಮತ್ತು ಕರ್ನಾಟಕ-ಮೈಸೂರು ಭಾಗಗಳ ಗ್ರಂಥಭಾಷೆ ಒಂದೇ ಇರುವಂತೆ ಮಾಡುವುದಕ್ಕಾಗಿ ಈ ಪತ್ರಿಕೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಾರಂಭಿಸಿತು. 1902ರಲ್ಲಿ ಮತ್ತು 1924ರಲ್ಲಿ ತೊಂದರೆಗಳು ಬಂದರೂ ಹೇಗೋ ಮುಂದುವರಿದು ಕೊನೆಗೆ 1931ರಲ್ಲಿ ನಿಂತಿತು. 1941ರಲ್ಲಿ ಮತ್ತೆ ಪ್ರಾರಂಭವಾಗಿ ಏಳು ವರ್ಷಗಳ ಕಾಲ ನಡೆಯಿತು. ಅನಂತರ ಅವಶ್ಯವೆನಿಸಿದಾಗ ಪ್ರಕಟವಾಗುವ ಪತ್ರಿಕೆಯಾಯಿತು. 1973ರಲ್ಲಿ 25 ವರ್ಷಗಳ ಅನಂತರ ಇದು ಮತ್ತೆ ಚೇತರಿಸಿಕೊಂಡು ನಿಯತಕಾಲಿಕೆಯಾಗಿ ಪ್ರಕಟವಾಗತೊಡಗಿತು. 

	ಕಥೆ-ಕವನ, ಹರಟೆ, ಪ್ರಬಂಧಗಳು ಮತ್ತು ಧಾರಾವಾಹಿ ಕಾದಂಬರಿ ಗಳು ಇದರಲ್ಲಿ ಪ್ರಕಟವಾಗುತ್ತಿದ್ದುವು. ಉತ್ತಮ ಕಾದಂಬರಿಕಾರರು ಮತ್ತು ಲೇಖಕರನ್ನು ಸೃಷ್ಟಿಸುವ ಉದ್ದೇಶದಿಂದ ಉತ್ತಮ ಕೃತಿಗಳಿಗೆ ಇದು ಬಹುಮಾನಗಳನ್ನು ನೀಡುತ್ತಿತ್ತು. ಪ್ರಸಿದ್ಧ ಕಾದಂಬರಿಕಾರ ಗಳಗನಾಥರು ಅಂಥ ಬಹುಮಾನದ ಆಸೆಯಿಂದಲೇ ತಮ್ಮ ಮೊದಲ ಕಾದಂಬರಿಯನ್ನು ಬರೆದರು. ರಾ.ಹ.ದೇಶಪಾಂಡೆ, ದೋಂಡೋ ನರಸಿಂಹ ಮುಳಬಾಗಲ, ವೆಂಕಟ ರಂಗೋ ಕಟ್ಟಿ, ಮುದವೀಡು ಕೃಷ್ಣರಾವ್, ಫ. ಗು. ಹಳಕಟ್ಟಿ, ಹೊನ್ನಾಪುರಮಠ, ಮ.ಪ್ರ. ಪೂಜಾರ, ಕೇಶವಶರ್ಮ ಗಲಗಲಿ, ಶಾಂತಾಬಾಯಿ ನೀಲಗಾರ, ಶಾಂತಕವಿ, ಆರ್.ವಿ. ಜಹಗೀರದಾರ ಇವರು ಈ ಪತ್ರಿಕೆಯಲ್ಲಿ ಲೇಖನ ಕಥೆ, ಕಾದಂಬರಿಗಳನ್ನು ಬರೆದ ಪ್ರಮುಖ ಲೇಖಕರು. ನಾರಾಯಣರಾವ್ ಕರಗುದರಿ, ರಾ.ಹ.ದೇಶಪಾಂಡೆ, ಆಲೂರ ವೆಂಕಟರಾವ್, ಆರ್.ವಿ.ಜಹಗೀರದಾರ ಇವರು ಈ ಪತ್ರಿಕೆಯ ಸಂಪಾದಕರಾಗಿದ್ದರು.
	  (ಎಸ್.ವಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ